ಚದರಿಸುವ ಸ್ತರಗಳು

ಶಬ್ದದ ಅಲೆಗಳನ್ನು ಚದರಿಸಿ ಪ್ರತಿಫಲಿಸಬಲ್ಲ ಮತ್ತು ಸಮುದ್ರದ ನಿರ್ದಿಷ್ಟ ಆಳಗಳಲ್ಲಿ ಕಂಡು ಬರುವ ಜೀವಿಸಮೂಹಗಳು (ಸ್ಕ್ಯಾಟರಿಂಗ್ ಲೇಯರ್ಸ್). ಇವು ಪ್ರತಿಫಲಿಸಿದ ಶಬ್ದ ತರಂಗಗಳನ್ನು ಪ್ರತಿಧ್ವನಿ ಗ್ರಾಹಕ ಸಲಕರಣೆಗಳ ನೆರವಿನಿಂದ ವಿಶ್ಲೇಷಿಸಿ ನೋಡಿದಾಗ ಈ ಜೀವಿ ಸಮೂಹಗಳು ಸಮುದ್ರತಳದಿಂದ ಮೇಲುಗಡೆ ಹೆಚ್ಚು ಕಡಿಮೆ ಕ್ಷಿತಿಜೀಯವಾಗಿ ಒಂದು ಸ್ತರದಂತೆ ಹದಡಿಕೊಂಡಿರುವಂತೆ ಕಾಣುತ್ತದೆ. ಅದ್ದರಿಂದ ಅವಕ್ಕೆ ಈ ಹೆಸರು. ಈ ಜೀವಿಗಳು ಸಮುದ್ರದ ತೆಟ್ಟೆ (ಷ್ಯಾಲೊ)ಪ್ರದೇಶಗಳಲ್ಲೂ ಕಂಡುಬಂದಿವೆ; ಆಳವಾದ ಪ್ರದೇಶಗಳಲ್ಲೂ ಕಂಡುಬಂದಿವೆ. ಖಂಡಗಳ ಕರೆಯ ಸನಿಹದಲ್ಲಿ ಖಂಡೀಯ ಬಡು (ಕಾಂಟಿನೆಂಟಲ್ ಶೆಲ್ಫ್) ಇದೆಯಷ್ಟೇ. ಅದರ ಆಳ 200 ಮೀಟರಿಗೂಕಡಿಮೆ. ಈ ಪ್ರದೇಶಗಳಲ್ಲಿ ಚದರಿಸುವ ಜೀವಿಗಳು ಮತ್ತು ಜೀವಿ ಸಮೂಹಗಳು ಅಷ್ಟು ಕ್ರಮಬದ್ಧ ಸ್ತರವಾಗಿ ರೂಪುಗೊಂಡಿರುವುದಿಲ್ಲ. ಇನ್ನೂ ಆಳವಾದ ಪ್ರದೇಶಗಳಲ್ಲಿಯಾದರೋ  ಜೀವಿ ಸಮೂಹಗಳ ಹಲವಾರು ನಿರ್ದಿಷ್ಟ ಸ್ತರಗಳನ್ನು ಗುರುತಿಸುವುದು ಸಾಧ್ಯವಾಗಿದೆ. 3 ರಿಂದ 60 ಏಊZ ಆವರ್ತಾಂಕದ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪ್ರತಿಧ್ವನಿಗ್ರಾಹಕ ಸಲಕರಣೆಗಳಿಂದ ಅವನ್ನು ಗುರುತಿಸಬಹುದು. ಆಳ ಪ್ರದೇಶಗಳಲ್ಲಿರುವ ಈ ಸ್ತರಗಳು ಸಾಮಾನ್ಯವಾಗಿ ದ್ಯುತಿಸಾಂದ್ರತೆಯನ್ನು ಅವಲಂಬಿಸಿದಂತೆ ಕಡಿಮೆ ಆಳದಿಂದ ಹೆಚ್ಚು ಆಳಕ್ಕೂ ಹೆಚ್ಚು ಆಳದಿಂದ ಕಡಿಮೆ ಆಳಕ್ಕೂ ವಲಸೆ ಹೋಗುವುದುಂಟು. ಉದಾಹರಣೆಗೆ, ಹಗಲಿನಲ್ಲಿ 200 ರಿಂದ 800 ಎಂ ಆಳದಲ್ಲಿರುವ ಈ ಸ್ತರಗಳು ರಾತ್ರಿಯ ವೇಳೆಯಲ್ಲಿ ಸಮುದ್ರದ ಮೇಲ್ಮೈ ಸಮೀಪಕ್ಕೆ ವಲಸೆ ಬಂದುಬಿಡುತ್ತವೆ. ಬೆಳದಿಂಗಳ ರಾತ್ರಿ ಅಷ್ಟು ಮೇಲ್ಗಡೆಗೆ ಬರುವುದಿಲ್ಲ: ಮೋಡ ಕವಿದಂದು ಹಗಲಿನಲ್ಲಿ ಅಷ್ಟು ಆಳಕ್ಕೆ ಹೋಗುವುದಿಲ್ಲ.

ಅನೇಕ ಜಲಚರ ಪ್ರಾಣಿಗಳ ಮತ್ತು ಸಸ್ಯಗಳಿಗೆ ಅವು ತೇಲಲು ಅನುಕೂಲ ಮಾಡಿಕೊಡುವ ವಾಯುತುಂಬಿದ ಅಂಗಗಳಿರುವುದುಂಟು. ಈ ಅಂಗಗಳು ದೇಹದ ಇತರ ಭಾಗಗಳಿಗಿಂತ ಹೆಚ್ಚಾಗಿ ಶಬ್ದವನ್ನು ಚದರಿಸುತ್ತವೆ. ಚದರಿಸುವ ಸ್ತರಗಳು ಬಹುಮಟ್ಟಿಗೆ ಈ ಬಗೆಯ ಜೀವಿಗಳಿಂದ ಆದವು.
(ಜೆ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ